ಕೃಷಿ ಮತ್ತು ಯುವಜನತೆ :

 

ಕೃಷಿ ಮತ್ತು ಯುವಜನತೆ :


ಭಾರತದಂತಹ ಬೃಹತ್‌ ರಾಷ್ಟ್ರಕ್ಕೆ  ಆಹಾರ ಭದ್ರತೆಯ ಜೊತೆಗೆ ಕೋಟ್ಯಾಂತರ ಕೃಷಿಕರಿಗೆ ಜೀವನ ಭದ್ರತೆ ಕಲ್ಪಿಸುತ್ತಿರುವ ನಮ್ಮ ದೇಶದ ಆಧಾರ ಸ್ಥಂಭವೇ ಕೃಷಿ ಕ್ಷೇತ್ರ. ಇಂದು ವೈಜ್ಞಾನಿಕ ಆವಿಷ್ಕಾರಗಳು, ತಂತ್ರಜ್ಞಾನಗಳು ಕೃಷಿ ಕ್ಷೇತ್ರದ  ಬೆಳವಣಿಗೆಯ ವೇಗವನ್ನು ದ್ವಿಗುಣಗೊಳಿಸಿದೆ.

ವೈವಿಧ್ಯಮಯ ಬೆಳೆ ಪದ್ದತಿಗಳು, ಸುಧಾರಿತ ತಳಿಗಳು, ಯಾಂತ್ರಿಕರಣದಿಂದಾಗಿ ನಮ್ಮ ದೇಶದ ಕೃಷಿ ಕ್ಷೇತ್ರ ಪ್ರಗತಿಯನ್ನು ಕಾಣುತ್ತಿದೆ. ಜೊತೆಗೆ  ಆಹಾರ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿಯಾಗುವಂತೆ ಮಾಡಿದೆ. ಕೃಷಿ ಎಂದರೇ  ಓದು ಬರಹ ತಿಳಿಯದ ಅನಕ್ಷರಸ್ಥರು, ಗ್ರಾಮೀಣ ಭಾಗಗಳಲ್ಲಿ ವಾಸಿಸುವ ಜನರು ಬದುಕು ಸಾಗಿಸಲು ಹುಡುಕುವ  ಕಟ್ಟಕಡೆಯ ಆಯ್ಕೆ ಎಂದು ಬಿಂಬತವಾಗಿದ್ದ ಕ್ಷೇತ್ರ ಇಂದು ಯುವಜನತೆಯನ್ನು ತನ್ನೇಡೆಗೆ ಆಕರ್ಷಿಸುತ್ತಿದೆ .

ಕೃಷಿ ಕ್ಷೇತ್ರಕ್ಕೆ ಅಕ್ಷರಸ್ಥ ಯುವಕರು ದಾಪುಗಾಲಿಡುತ್ತಿರುವುದು ಆಶಾದಾಯಕವಾಗಿದೆ. ಇಂದಿನ ಯುವಕರಲ್ಲಿ ಕೃಷಿಯ ಕುರಿತಾದ ಆಸಕ್ತಿ ಹೆಚ್ಚುತ್ತಿರುವುದನ್ನು ಗಮನಿಸಬಹುದಾಗಿದೆ. ವ್ಯವಸ್ಥಿತವಾದ ಕೃಷಿ ಹಾಗೂ ಮಾರುಕಟ್ಟೆ ನೈಪುಣ್ಯತೆಯ ಜೊತಗೆ ಯುವಸಮೂಹ ಕೃಷಿ ಕ್ಷೇತ್ರ ಪ್ರವೇಶಿಸುತ್ತಿರುವುದು ಕೃಷಿ ಕ್ಷೇತ್ರವನ್ನು ಮತ್ತಷ್ಟು ಆಶಾದಾಯಕ ದೃಷ್ಠಿಯಿಂದ ನೋಡುವಂತೆ ಮಾಡಿದೆ.

ಕರೋನಾ ನಂತರದ ದಿನಗಳಲ್ಲಿ ಪ್ರತಿಯೋಬ್ಬರ ಬದುಕು ಒಂದು ಹೊಸ ಆಯಾಮವನ್ನು ಪಡೆದುಕೊಂಡಿತು. ಬದುಕು ನೂತನ ಅಭ್ಯಾಸ ಮತ್ತು ಹವ್ಯಾಸಗಳಿಗೆ ತೆರೆದುಕೊಂಡಿತು. ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದೇ ಬದುಕನ್ನು ವಿಭಿನ್ನ ದೃಷ್ಠಿಕೋನದಿಂದ ನೋಡಲಾರಂಬಿಸಿದೆವು. ಆದರ ಫಲವಾಗಿ ಆರ್ಥಿಕವಾಗಿ ಸದೃಡರಾಗಿರುವ, ವ್ಯವಸ್ಥಿತ ವೇತನ ಪಡೆಯುವ ಒಂದು ವರ್ಗ ತನ್ನ ವೃತ್ತಿಯ ಜೊತೆ ಜೊತೆಗೆ  ಕೃಷಿ ಕ್ಷೇತ್ರವನ್ನು ಪ್ರವೇಶಿಸುತ್ತಿದೆ.

ಕರೋನಾದಿಂದ ಉಂಟಾದ ಅನಿಶ್ಚಿತತೆಯ ಭಯವೇ ಕೃಷಿ ಕ್ಷೇತ್ರಕ್ಕೆ ಯುವಕರು ಬರಲು ಬಹು ಮುಖ್ಯ ಕಾರಣಗಳಲ್ಲೋಂದಾಗಿದೆ. ಗ್ರಾಮೀಣ ಭಾಗದಿಂದ ಪಟ್ಟಣ ಸೇರಿದ್ದ ಲಕ್ಷಾಂತರ ಯುವಕರು ಮತ್ತೆ ತಮ್ಮ ಹಳ್ಳಿಯ ಕಡೆಗೆ ಮುಖ ಮಾಡಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಸಾಫ್ಟ್‌ ವೇರ್‌ ಕ್ಷೇತ್ರವು ಸಹ  ತನ್ನ ಸಿಬ್ಬಂದಿಗಳನ್ನು ಮನೆಯಿಂದಲೇ ಕೆಲಸ ಮಾಡಿಸುತ್ತಾ ಲಾಭದಾಯಕವಾಗಿದೆ. ಇದರಿಂದ ಸಾಫ್ಟ್‌ ವೇರ್‌ ಕ್ಷೇತ್ರದಲ್ಲಿದ್ದ ಯುವ ಸಮೂಹ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ.

 ನಾನು ಮೊದಲೇ ಹೇಳಿದಂತೆ ಮಾರುಕಟ್ಟೆ ನೈಪುಣ್ಯತೆ ಮತ್ತು ಮಾರುಕಟ್ಟೆಯನ್ನು ಅರ್ಥೈಸಿಕೊಳ್ಳುವಲ್ಲಿ ಇಂದಿನ ಯುವ ಸಮೂಹ ಮುಂದಿದೆ. ಇದರಿಂದ ರೈತ ಸರ್ಕಾರಗಳ ಮುಂದೆ ಕೈಚಾಚ ಬೇಕಾದ ಪರಿಸ್ಥಿತಿ ಕಡಿಮೆಯಾಗುತ್ತಿದೆ. ತನ್ನ ಉತ್ಪನ್ನಗಳಿಗೆ ತಾನೇ ಮಾರುಕಟ್ಟೆ ನಿರ್ಮಾಣ ಮಾಡಿಕೊಳ್ಳುವುದನ್ನು ನಾವು ಗಮನಿಸಬಹುದಾಗಿದೆ. ಮಧ್ಯವರ್ತಿಗಳ ಹಿಡಿತದಿಂದ ಕೃಷಿ ಮಾರುಕಟ್ಟೆಗಳ ಯನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಸಹಾಯದಿಂದ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ “ನೇರ ಮಾರುಕಟ್ಟೆ” ನಿರ್ಮಾಣ ಮಾಡಿರುವ ನೂರಾರು ರೈತರು ನಮ್ಮ ನಡುವೆಯೇ ಇದ್ದಾರೆ.  ಇಷ್ಟೆ ಅಲ್ಲದೇ ರೈತ ತನ್ನ ಉತ್ಪನ್ನಗಳಿಗೆ ಮೌಲ್ಯ ವರ್ಧನೆ ಮಾಡಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಾನೆ.


      ಕೃಷಿ ಯುವ ಜನತೆಯನ್ನು ಆಕರ್ಷಿಸುತ್ತಿರುವ ಪರಿಣಾಮ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ಸಾಧ್ಯವಾಗುತ್ತಿದೆ. ಜನ ಸಾಮಾನ್ಯರು ರಾಸಯನಿಕಗಳ  ಬಳಕೆಯಿಂದ ತಮ್ಮ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮವನ್ನು ಗಂಬೀರವಾಗಿ ಪರಿಗಣಿಸಿದ್ದಾರೆ. ರಾಸಯನಿಕ ಮುಕ್ತ ಸಾವಯವ, ನೈಸರ್ಗಿಕ ಕೃಷಿಯ ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸಿರುವುದರಿಂದ ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇದೆಲ್ಲರ ಮಧ್ಯೆ ವಿದ್ಯಾರ್ಥಿ ಬದುಕಿಗೆ ವೈಧ್ಯಕೀಯ ಮತ್ತು ಇಂಜಿನಿಯರ್‌ ಕ್ಷೇತ್ರಗಳು ಮಾತ್ರ  ಎಂಬ ಭಾವನೆ ಹೆಚ್ಚಾಗಿತ್ತು ಈಗ ಕ್ರಮೇಣವಾಗಿ ಕೃಷಿ, ತೋಟಗಾರಿಕೆ , ರೇಷ್ಮೆ ವೆಟರ್ನರಿ ಸೈನ್ಸ್‌ ಪುಡ್‌ ಟೆಕ್ನಾಲಜಿ,ಅರಣ್ಯ ವಿಜ್ಞಾನ, ಗೃಹ ವಿಜ್ಞಾನ, ಕೃಷಿ ಇಂಜಿನಿಯರಿಂಗ್‌, ಡೇರಿ ಟೆಕ್ನಾಲಜಿ, ಬಯೋ ಟೆಕ್ನಾಲಜಿ, ಅಗಿಕ್ಚರಲ್‌ ಮಾರ್ಕೆಟಿಂಗ್ ಕುರಿತಾದ ವಿಭಾಗದಲ್ಲಿ ಪದವಿಗಳನ್ನು ಪಡೆಯಲು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಂದು ರೈತನ ಸಾಹಸಗಾಥೆಗಳು ಹೆಚ್ಚಾಗಿ ಸಿಗುತ್ತಿವೆ. ಭೂಮಿಯೊಂದಿಗೆ ಇಂದಿನ ಯುವಕರು ಅನೇಕ ಕೃಷಿ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗುತ್ತಿದ್ದಾರೆ. ಕಾಶ್ಮೀರದಲ್ಲಿ ಬೆಳೆಯುವ ಸೇಬಿನ ಹಣ್ಣು ಯಾದಗಿರಿಯ ರೈತ ತನ್ನ ಜಮೀನಿನಲ್ಲಿ ಬೆಳದು ಯಶಸ್ವಿಯಾಗಿದ್ದಾನೆ. ಚಾಮರಾಜನಗರದ ರೈತ ನ್ಯೂಯಾರ್ಕ್‌ ನಲ್ಲಿ ತನ್ನ ಬೆಳೆಗಳಿಗೆ  ಮಾರುಕಟ್ಟೆ ಮಾಡಿಕೊಂಡಿದ್ದಾನೆ. ಕೋಲಾರದ ರೈತನ ಮನೆ ಬಾಗಿಲಲ್ಲಿ ಪ್ರತಿದಿನ ಪೇರಲೆ ಹಣ್ಣು(ಸೀಬೆ) ಖರೀದಿಸಲು ರಿಲಯನ್ಸ್‌ , ಬಿಗ್‌ ಬಾಸ್ಕೆಟ್‌,  ಡಿ ಮಾರ್ಟ್‌ ನಂತಹ ದೈತೈ ರಿಟೈಲ್‌ ಕಂಪನಿಗಳು ಬೆಳಂಬೆಳಗ್ಗೆ 5 ಗಂಟೆಗೆ ಬಂದು ಕಾಯುತ್ತಾ ನಿಲ್ಲುತ್ತಾರೆ ಎಂದರೇ ನನ್ನ ದೇಶದ ಕೃಷಿ ಕ್ಷೇತ್ರ ಬದಲಾಗುತ್ತಿದೆ ಅಲ್ಲವೇ ?

ಈ ಬೆಳವಣಿಗೆಗಳು ನಿರಂತರವಾಗಿ ಸಾಗಬೇಕು ಇದಕ್ಕೆ ಬೇಕಾದ ಅಗತ್ಯ ಪೂರಕ ವಾತವರಣವನ್ನು ಕಲ್ಪಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಬ್ದಾರಿಯಾಗಿದೆ. ರೈತರಿಗೆ ಅಗತ್ಯ ಮಾಹಿತಿ ನೀಡುವ ಮಾರ್ಗದರ್ಶನ ಮಾಡುವ ರೈತ ಸಂಪರ್ಕ ಕೇಂದ್ರಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೃಷಿ ಅಧಿಕಾರಿಗಳು ರೈತನ ಮಿತ್ರರಾಗಬೇಕು. ಹೆಚ್ಚು ಹೆಚು ಕೃಷಿ ಸಂಬಂಧಿತವಾದ ಸಂಶೋಧನೆಗಳಿಗೆ ಸರ್ಕಾರಗಳು ಮುಂದಾಗಬೇಕು. ಶೈಕ್ಷಣಿಕವಾಗಿ ಕೃಷಿ ಸಂಬಂಧಿತವಾದ ವಿಷಯಗಳನ್ನು ಪಠ್ಯಗಳಲ್ಲಿ ಸೇರಿಸಬೇಕು. ಆ ಮೂಲಕ ಕೃಷಿ ಕ್ಷೇತ್ರದಕಲ್ಲಿ ಸಾಧನೆ ಮಾಡಿದ ಮಹನೀಯರ ಪರಿಚಯವಾಗಬೇಕು. ಅವರಲ್ಲೇರು ನಮ್ಮ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು.

ವಿಶೇಷವಾಗಿ ಎಲ್ಲಾ ಕಾಲೇಜುಗಳಲ್ಲೂ ಕೃಷಿ ಸಂಬಂಧಿತ ಅಥಾವ ಪೂರಕವಾದ ಕೋರ್ಸ್‌ ಗಳು ಪ್ರಾರಂಭವಾಗಬೇಕು. ರೈತ ತನ್ನ ಉತ್ಪನ್ನಗಳಿಗೆ ಹೇಗೆ ಮಾರುಕಟ್ಟೆ ಕಲ್ಪಿಸಿಕೊಳ್ಳಬೇಕು, ಉತ್ಪನ್ನಗಳ ಮೌಲ್ಯ ವರ್ಧನೆ ಹೇಗೆ ಮಾಡಬಹುದು. ತನ್ನ ಉತ್ಪನ್ನಗಳನ್ನು ಬಹುಕಾಲದ ವರಗೆ ಸಂರಕ್ಷಿಸುವ ಕುರಿತು ಹೋಬಳಿ, ತಾಲ್ಲೋಕು ಮತ್ತು ಜಿಲ್ಲಾ ಮಟ್ಟದಲ್ಲಿ ನಿರಂತರ ಕಾರ್ಯಾಗಾರಗಳ ಆಯೋಜನೆಯಾಗಬೇಕು. ಬಹಳ ಮುಖ್ಯವಾಗಿ ಪ್ರತಿ ಗ್ರಾಮದಲ್ಲೂ ಒಂದು ಶೈತ್ಯಗಾರ(Cold Storage)ಗಳನ್ನು ಸರ್ಕಾರ ನಿರ್ಮಾಣ ಮಾಡಬೇಕು. ಇದರ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ.  ಆಗ ನಮ್ಮ ದೇಶ ಇಡೀ ವಿಶ್ವಕ್ಕೆ ಆಹಾರ ಭದ್ರತೆ ಒದಗಿಸುವ ರಾಷ್ಟವಾಗಿ, , ನಿಜ ಅರ್ಥದಲ್ಲಿ ವಿಶ್ವಗುರುವಾಗಿ, ವಸುದೈವ ಕುಟುಂಬಕಂ ಎಂಬ ಶಬ್ದಕ್ಕೆ ಅರ್ಥ ಬರುವಂತಾಗುತ್ತದೆ.

ಕಾಮೆಂಟ್‌ಗಳು

  1. ಲೇಖನ ಚೆನ್ನಾಗಿ ಮೂಡಿಬಂದಿದೆ
    ಮನುಷ್ಯನಿಗೆ ವೃತ್ತಿಯ ಜೊತೆಗೆ ಹವ್ಯಾಸ ಕೂಡ ಇರಬೇಕು ಇದು ನನ್ನ ಅಂಬೋಣ

    ಪ್ರತ್ಯುತ್ತರಅಳಿಸಿ
  2. ಯುವಕರ ನಡೆ ಕೃಷಿ ಕಡೆ ಸಾಗಲಿ. The article is very informative.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಠ್ಯ ಪರಿಷ್ಕರಣೆ : ಒಂದು ದೃಷ್ಠಿಕೋನ

ಅನೀಶ್ ನಿನ್ನಂತಹವರೇ ನಮ್ಮ ಕನ್ನಡ ಮತ್ತು ಕರ್ನಾಟಕದ ನಿಜವಾದ ಆಸ್ತಿ . . . . .

ಯುಗಾದಿ ಬಂತೆಂದರೇ “ತಾತ” ನ ನೆನಪು ಕಾಡುತ್ತದೆ.